ಮಂಗಳೂರು, ಎ.25: ಯಾರೋ ಕಿಡಿಗೇಡಿಗಳು ಅಂಬೇಡ್ಕರ್ ಪ್ರತಿಮೆಗೆ ಅಥವಾ ಭಾವಚಿತ್ರಕ್ಕೆ ಚಪ್ಪಲಿ ಹಾಕಿದರೆ ದಲಿತರು ಬೊಬ್ಬಿಡುತ್ತಾರೆ. ಆದರೆ, ಅದೇ ದಲಿತರು ಡಾ. ಬಿ.ಆರ್. ಅಂಬೇಡ್ಕರರ ಆದರ್ಶ ಮತ್ತು ತತ್ವ ಸಿದ್ಧಾಂತಗಳನ್ನು ಪಾಲಿಸದೆ ಅವಮಾನ ಮಾಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ. ಬಿ.ಕಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ವೆಂಕಟ ಗಿರಿಯಯ್ಯ ವಿಷಾದಿಸಿದರು.
ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ 119ನೆ ಜನ್ಮ ದಿನಾಚರಣೆಯ ಅಂಗವಾಗಿ ಇಂದು ನಡೆದ ‘ಶೋಷಿತರ ವಿಮೋಚನಾ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ದಲಿತ ಸಂಘಟನೆಗಳಲ್ಲದೆ ಸರಕಾರ ಮತ್ತು ಸಂಘಪರಿವಾರದ ಕೆಲವು ಸಂಘಟನೆಗಳು ಕೂಡ ಆಚರಿಸುತ್ತಿವೆ. ಆದರೆ, ಅವೆಲ್ಲವೂ ಸೋಗಿನದ್ದಾಗಿದೆ. ದಲಿತರನ್ನು ಗುಂಪು ಗುಂಪುಗಳನ್ನಾಗಿ ವಿಂಗಡಿಸಿ ದಮನಿಸುವುದು ಅವುಗಳ ಉದ್ದೇಶವಾಗಿದೆ. ಇದನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು.
ದಲಿತರಲ್ಲಿ ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ್ಯವಾದಿತ್ವ ಹೆಚ್ಚುತ್ತಿವೆ. ನಮ್ಮ ಪೂರ್ವಜರು ತಿರಸ್ಕರಿಸಿದ್ದನ್ನು ಇಂದಿನ ದಲಿತರು ಪುರಸ್ಕರಿಸುತ್ತಿದ್ದಾರೆ. ಕುಡಿತ, ಜೂಜು, ವ್ಯಭಿಚಾರ ಇತ್ಯಾದಿ ಅಕ್ರಮಗಳೆಲ್ಲವೂ ಮೇಲ್ವರ್ಗದಲ್ಲಿ ಹೆಚ್ಚು ಇತ್ತು. ಇಂದು ಅದನ್ನು ದಲಿತರು ಮೈಗೂಡಿಸಿಕೊಳ್ಳುತ್ತಿದ್ದಾರೆ. ಬ್ರಾಹ್ಮಣತ್ವ ಸ್ವೀಕಾರಕ್ಕೆ ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ. ಪುಣ್ಯ ಕಾರ್ಯಗಳಿಗೆ ಪುರೋಹಿತರನ್ನು ಕರೆಯುವಂತಹ, ಗೀತೆಗಳನ್ನು ಹೇಳಿಕೊಳ್ಳುವಂತಹ ಪ್ರವತ್ತಿ ಬೆಳೆಯುತ್ತಿವೆ. ಇದು ದಲಿತ ಸಂಸ್ಕೃತಿ ಅಲ್ಲವೇ ಅಲ್ಲ. ದಲಿತರ ನಿಜವಾದ ಸಂಸ್ಕೃತಿ ನಾಶವಾಗುತ್ತಿದ್ದು, ಇದರಿಂದ ಹೊರ ಬರಲು ದಲಿತರು ಮಾನಸಿಕ ಬಂಡಾಯ ಏಳಬೇಕು. ರಾಜಿ ಮನೋಭಾವದಿಂದ ದೂರ ಇರಬೇಕು. ಬೇಡುವ ಬದಲು ತಮ್ಮ ಹಕ್ಕನ್ನು ಹೋರಾಟದಿಂದ ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ ಕಷ್ಣಾನಂದ ಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಶ್ರೀಧರ್ ಕಲಿವೀರ್, ದೊಡ್ಡ ಮಹಾದೇವಯ್ಯ, ಎಂ. ದೇವದಾಸ್, ಶ್ರೀನಿವಾಸಲು ಜೆ, ಎಂ. ಕೂಸಪ್ಪ ಪುತ್ತೂರು, ಉಪನ್ಯಾಸಕರಾದ ಡಾ. ಗೋವಿಂದ ರಾಜ್, ಡಾ. ಮೋಹನ್ ಸಿಂಗ್ ಭಾಗವಹಿಸಿದ್ದರು.
ಒಳ್ಳೆಯ ಹಾರ ಹಾಕಿ
ಉದ್ಘಾಟನೆ ಸಂದರ್ಭ ಅಳವಡಿಸಿದ ಅಂಬೇಡ್ಕರ್‌ರ ಭಾವಚಿತ್ರವನ್ನು ಕಂಡ ವೆಂಕಟ ಗಿರಿಯಯ್ಯ, ‘ಡಾ. ಬಿ.ಆರ್.ಅಂಬೇಡ್ಕರ್‌ರ ಈ ಭಾವಚಿತ್ರ ಚೆನ್ನಾಗಿಲ್ಲ. ಒಂದೊಳ್ಳೆಯ ಭಾವಚಿತ್ರ, ಬಟ್ಟೆ, ಹಾರ ಹಾಕಬಾರದಾ? ಅದಕ್ಕೂ ನಮ್ಮಲ್ಲಿ ಬಡತನ ಉಂಟಾಯಿತಾ? ನಾವೇ ಅಂಬೇಡ್ಕರ್‌ಗೆ ಹೀಗೆ ಮಾಡಿದರೆ ಹೇಗೆ? ಮೊದಲು ನಾವು ಅಂಬೇಡ್ಕರ್‌ರನ್ನು ಗೌರವಿಸಲು ಕಲಿಯೋಣ’ ಎಂದು ಹೇಳುವ ಮೂಲಕ ಸಂಘಟಕರ ಕಾರ್ಯವೈಖರಿಯನ್ನು ಪ್ರಶ್ನಿಸಿದರು.
‘ಮಹಿಳಾ ಮೀಸಲಾತಿಯ ಹಿಂದೆ ಷಡ್ಯಂತ್ರ’
ಯುಪಿಎ ಸರಕಾರ ಮಹಿಳಾ ಮೀಸಲಾತಿಯನ್ನು ತರಲು ಮುಂದಾಗಿದ್ದು, ಒಂದು ಹಂತದಲ್ಲಿ ಬಿಜೆಪಿ, ಎಡಪಕ್ಷಗಳ ಬೆಂಬಲವೂ ಅದಕ್ಕೆ ಸಿಕ್ಕಿದೆ. ಡಾ.ಬಿ.ಆರ್. ಅಂಬೇಡ್ಕರ್ ಕಾನೂನು ಸಚಿವರಾಗಿದ್ದಾಗ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಇದೇ ಕಾಂಗ್ರೆಸಿಗರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಅದನ್ನು ಜಾರಿಗೊಳಿಸಲು ಮುಂದಾಗಿದೆ. ಆದರೆ, ಮಹಿಳಾ ಮೀಸಲಾತಿಯ ಹಿಂದಿನ ಮರ್ಮ ಏನು ಎಂದು ತಿಳಿದುಕೊಳ್ಳಬೇಕು. ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಬ್ರಾಹ್ಮಣ ಮಹಿಳೆಯರನ್ನು ಸಂಸತ್ತಿಗೆ ಕಳುಹಿಸುವ ಹುನ್ನಾರ ಇದರಲ್ಲಿ ಅಡಗಿದೆ. ಅದಕ್ಕೆ ಬಿಜೆಪಿ, ಎಡಪಕ್ಷಗಳ ಸಹಿತ ಇತರ ಕೆಲವು ಪಕ್ಷಗಳು ಬೆಂಬಲಿಸುತ್ತಿರುವುದರ ಹಿಂದಿನ ಅಜೆಂಡಾವನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು ಎಂದು ವೆಂಕಟ ಗಿರಿಯಯ್ಯ ಹೇಳಿದರು.